ಬ್ರಿಸ್ಟಲ್
	ಬ್ರಿಟನ್ನಿನ ಒಂದು ಮಹಾನಗರ ಮತ್ತು ಬಂದರು. ಇಂಗ್ಲೆಂಡಿಗೆ ಪಶ್ಚಿಮದಲ್ಲಿ 192 ಕಿಮೀ ದೂರದಲ್ಲಿ ಏವನ್ ಮತ್ತು ಫ್ರೌಮ್ ನದಿಗಳ ಸಂಗಮ ಸ್ಥಳದಲ್ಲಿದೆ. ಉ ಅ. 51º27 ಪ.ರೇ. 2º35. ಇದೊಂದು ಕೌಂಟಿ (1373ರಿಂದ). ಜನಸಂಖ್ಯೆ 425, 203 (1971).

	ಬ್ರಿಸ್ಟಲ್ ಕಾಲುವೆ ಮುಖಾಂತರ ಅಟ್ಲಾಂಟಿಕ್ ಸಾಗರ ಸಂಪರ್ಕ ಪಡೆದಿರುವ ಈರೇವು ಒಂದು ಮುಖ್ಯ ಹಡಗುನಿಲ್ದಾಣ ಮತ್ತು ನಿರ್ಮಾಣಕೇಂದ್ರ. 1216ರಲ್ಲಿ ಈ ನಗರದ ಪ್ರಥಮ ಮೇಯರನ ಆಯ್ಕೆ ನಡೆಯಿತು. 1247ರಲ್ಲಿ ಫ್ರೌಮ್‍ನದಿಯ ದಿಕ್ಕು ಬದಲಾಯಿಸಿ ಬಂದರು ಕಟ್ಟೆ ಕಟ್ಟಲಾಯಿತು. ಮೂರನೆಯ ಎಡ್ವರ್ಡ್‍ನ ಕಾಲದಲ್ಲಿ (1312-77) ಬ್ರಿಸ್ಟಲ್ ಪ್ರಮುಖ ಉಣ್ಣಿ ವ್ಯಾಪಾರ ಕೇಂದ್ರವಾಗಿದ್ದು ಐರ್ಲೆಂಡಿನಿಂದ ಉಣ್ಣಿಯನ್ನೂ ಸ್ಪೇನ್‍ನಿಂದ ಷೆರಿ ಮದ್ಯವನ್ನೂ ಪೋರ್ಚುಗಲ್‍ನಿಂದ ದ್ರಾಕ್ಷಾರಸವನ್ನೂ ಆಮದು ಮಾಡಿಕೊಂಡು, ಉಣ್ಣಿ ಬಟ್ಟೆಗಳನ್ನು ರಫ್ತು ಮಾಡುತ್ತಿತ್ತು. ಜಾನ್ ಮತ್ತು ಸೆವಾಸ್ಟಿಯನ್‍ಕಾಬಟ್ ಹೊಸ ಜಗತ್ತಿನ ಅನ್ವೇಷಣೆಯಲ್ಲಿ ಅಮೆರಿಕಾದೆಡೆಗೆ ಹೊರಟಿದ್ದು ಇಲ್ಲಿಂದಲೇ (1497). ಅಂತರ್ಯುದ್ದದ ಸಮಯದಲ್ಲಿ, ಇಂಗ್ಲಿಷ್ ದೊರೆಗಳ ಭದ್ರ ಕೋಟೆಯಾಗಿದ್ದ ಈ ನಗರವನ್ನು 1645ರಲ್ಲಿ ಪಾರ್ಲಿಮೆಂಟೇರಿಯನ್ನರು ವಶಪಡಿಸಿಕೊಂಡರು.  ಪಶ್ಚಿಮ ಆಫ್ರಿಕ, ವೆಸ್ಟ್ ಇಂಡಿಯನ್ ಮತ್ತು ಅಮೆರಿಕನ್ ಪ್ಲಾಂಟೇಶನ್ ಕಾಲೋನಿಗಳ ನಡುವೆ ನಡೆಯುತ್ತಿದ್ದ ಗುಲಾಮರ ವ್ಯಾಪಾರ ಕೇಂದ್ರವಾಗಿ ಈ ನಗರ 17ನೆಯ ಶತಮಾನದ ಅಂತ್ಯ ಹಾಗೂ 18ನೆಯ ಶತಮಾನಗಳಲ್ಲಿ ಅಭಿವೃದ್ದಿಗೊಂಡಿತು, ವರ್ಜಿನಿಯಾ ಹೊಗೆಸೊಪ್ಪು, ಜಮೈಕಾದ ಸಕ್ಕರೆ, ಪಶ್ಚಿಮ ಆಫ್ರಿಕಾದ ಕೋಕೋಗಳ ವ್ಯಾಪಾರದಿಂದ ಹಾಗೂ ಚಾಕೊಲೇಟ್ ತಯಾರಿಕಾ ಕೇಂದ್ರವಾಗಿ ಈ ನಗರ ಬೆಳೆಯಿತು. ಆದರೆ 19ನೆಯ ಶತಮಾನದ ಹೊತ್ತಿಗೆ ಲಂಕಾಷೈರ್ ಹತ್ತಿ ಗಿರಣಿ ಕೈಗಾರಿಕೆ ಗುಲಾಮರ ವ್ಯಾಪಾರ ಬಹಿಷ್ಕಾರ ಮತ್ತು ಹಡುಗು ವಾಣಿಜ್ಯದ ಹತೋಟಿ ಇವುಗಳಿಂದ ಇದರ ವಾಣಿಜ್ಯ ಪ್ರಾಮುಖ್ಯಕ್ಕೆ ಧಕ್ಕೆಯುಂಟಾಗಿ ಲಿವರ್‍ಪೂಲ್ ನಗರ ಬೆಳೆಯಲು ಕಾರಣವಾಯಿತು. 1838ರಲ್ಲಿ ಇಲ್ಲಿಯ ಹಡುಗು ಕಟ್ಟೆಯಲ್ಲಿ ಕಟ್ಟಿದ ಗ್ರೇಟ್ ವೆಸ್ಟನ್ ಎಂಬ ದೊಡ್ಡ ಹಡುಗು ಅಟ್ಲಾಂಟಿಕ್ ಸಾಗರ ದಾಟಿದ ಹಬೆ ಹಡಗುಗಳ ಪೈಕಿ ಎರಡನೆಯದು. 1843ರಲ್ಲಿ ಕಬ್ಬಿಣ ಬಳಸಿ ಕಟ್ಟಿದ ಪ್ರಥಮ ಹಡಗು ಗ್ರೇಟ್ ಬ್ರಿಟನ್ ನಿರ್ಮಾಣವಾದ್ದು ಇಲ್ಲಿಯೇ. ಮುಂದೆ ನಗರ ಅನೇಕ ಬಡಾವಣೆಗಳೊಂದಿಗೆ ಬೆಳೆಯುತ್ತ ಬಂತು. ಬ್ರಿಸ್ಟನ್ ಗ್ರಾಮರ್ ಸ್ಕೂಲ್, ಕ್ವೀನ್ ಎಲಿಜಬೆತ್ ಆಸ್ಪತ್ರೆ,, ಕೆಥೆಡ್ರಲ್ ಸ್ಕೂಲ್, ಕೊಲ್ಸ್‍ಟನ್ ಸ್ಕೂಲ್ ಎಲ್ಲವೂ 16ನೆಯ ಶತಮಾನದಲ್ಲಿ ಸ್ಥಾಪಿಸಲ್ಪಟ್ಟವು. 1862ರಲ್ಲಿ ಕ್ಲಿಫ್ಟನ್ ಕಾಲೇಜ್ ಪ್ರಾರಂಭವಾಯಿತು. 1876ರಲ್ಲಿ ಬ್ರಿಸ್ಟಲ್ ಯೂನಿವರ್ಸಿಟಿ ಕಾಲೇಜ್ ಸ್ಥಾಪಿತವಾಗಿ ಮುಂದೆ ಅದೇ ಬ್ರಿಸ್ಟಲ್ ವಿಶ್ವವಿದ್ಯಾನಿಲಯವಾಯಿತು (1909). ಎರಡನೆಯ ಮಹಾಯುದ್ಧದಲ್ಲಿ ಬ್ರಿಸ್ಟಲ್‍ನಲ್ಲಿದ್ದ ಅನೇಕ ಐತಿಹಾಸಿಕ ಕಟ್ಟಡಗಳು ನಾಶವಾದವು.

	1841ರಲ್ಲಿ ಪ್ರಾರಂಭವಾದ ರೈಲು ಸಂಚಾರ ಮತ್ತು ಹಡಗು ಕಟ್ಟೆಗಳ ವಿಸ್ತರಣೆಯಿಂದ ಬ್ರಿಸ್ಟಲ್‍ನಲ್ಲಿ ಮಾಂಸ, ಹೊಗೆಸೊಪ್ಪು, ಮದ್ಯಸಾರ ಮತು ಹಣ್ಣುಗಳ ವ್ಯಾಪಾರ ಹೆಚ್ಚಿತು. ಆಮದಾಗುವ ಪದಾರ್ಥಗಳಲ್ಲಿ ಪೆಟ್ರೊಲಿಯಮ್ ಮರದ ದಿಮ್ಮಿಗಳು, ಜಿಂಕ್ ಮತ್ತು ಫಾಸ್ಭೇಟ್‍ಗಳು ಮುಖ್ಯವಾದವು. ರಫ್ತಿನ ಪದಾರ್ಥಗಳಲ್ಲಿ ಸಿದ್ಧವಸ್ತುಗಳು, ಯಂತ್ರೋಪಕರಣ, ಕಾರು, ಟ್ರಾಕ್ಟರ್ ಪ್ರಮುಖವಾದವು. ಇದರಿಂದ ಬ್ರಿಸ್ಟಲ್‍ನ ಸುತ್ತಮುತ್ತ ಅನೇಕ ಆಧುನಿಕ ಕೈಗಾರಿಕೆಗಳು ಬಂದರಿನ ಅನುಕೂಲತೆ ಪಡೆದು ಬೆಳೆದವು. ಅವುಗಳಲ್ಲಿ ಸಕ್ಕರೆ ಕೈಗಾರಿಕೆ, ಹೊಗೆಸೊಪ್ಪು ಸಂಸ್ಕರಣ, ಕೋಕೋ ಮತ್ತು ಚಾಕೋಲೇಟ್ ಕೈಗಾರಿಕೆ, ಮದ್ಯಸಾರ ತಯಾರಿಕೆ, ಗಾಜಿನ ಕೈಗಾರಿಕೆ, ಪೋರ್ಸಲಿನ್, ಪಾಟರಿ ಕೈಗಾರಿಕೆ ಮುಖ್ಯವಾದವು. ಆಧುನಿಕ ಕೈಗಾರಿಕೆಗಳಲ್ಲಿ ಅಲ್ಲಿಯ ವಿಮಾನ ಕಾರ್ಖಾನೆಯನ್ನು ಹೆಸರಿಸಬಹುದು.

	ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬ್ರಿಸ್ಟಲ್ ಹೆಸರಿನ ಕೆಲವು ನಗರಗಳಿವೆ ಅವುಗಳಲ್ಲಿ ಕೆಲವನ್ನು ಮುಂದೆ ಕೊಡಲಾಗಿದೆ.

	ಬ್ರಿಸ್ಟಲ್ 2 : ಅಮೆರಿಕ ಸಂಯುಕ್ತ ಸಂಸ್ಥಾನದ ಮಧ್ಯಕನೆಕ್ಟಿಕಟ್ ಪ್ರಾಂತ್ಯದ ಒಂದು ಕೈಗಾರಿಕಾ ನಗರ. ಪ್ರಾಂತ್ಯದ ಆಡಳಿತ ಕೇಂದ್ರವಾದ ಹಾರ್ಟ್‍ಫರ್ಡ್ ನಗರಕ್ಕೆ ನೈಋತ್ಯದಲ್ಲಿ ಸುಮಾರು 24ಕಿಮೀ ದೂರದಲ್ಲಿದೆ. 1727ರಲ್ಲಿ ನೆಲಸಿದ ಈ ವಸಾಹತು, ಫಾರ್ಮಿಂಗ್‍ಟನ್ನಿನ ಒಂದು ಭಾಗವಾಗಿದ್ದು ಅನಂತರ ನ್ಯೂ ಕೇಂಬ್ರಿಡ್ಜ್ ಎಂಬ ಹೆಸರಿನಿಂದ ಪ್ರಖ್ಯಾತಿಗೆ ಬಂತು. ಇದನ್ನು 1785ರಲ್ಲಿ ಒಂದು ಪಟ್ಟಣವಾಗಿ ಗುರುತಿಸಲಾಯಿತು. 1911ರಲ್ಲಿ ಬ್ರಿಸ್ಟಲ್ ಬರೋ ಬಡಾವಣೆಯ ಸೇರ್ಪಡೆಯೊಂದಿಗೆ ನಗರವೆಂದು ಸಾರಲಾಯಿತು. ಜನಸಂಖ್ಯೆ 55,487. ಮಹಾನಗರ ಜನಸಂಖ್ಯೆ 71,732 (1970).

	ಅಮೆರಿಕನ್ ಕ್ರಾಂತಿ ಸಮಯದಲ್ಲಿ ಬ್ರಿಸ್ಟಲ್ ಪಟ್ಟಣ ಟೋರಿ ರಾಜಕೀಯ ಪಕ್ಷದ ಚಟುವಟಿಕೆಯ ಕೇಂದ್ರವಾಗಿತ್ತು. ಇಲ್ಲಿರುವ ಚಿಪ್ಪನ್ಸ್ ಬೆಟ್ಟದ ಮೇಲಿರುವ ಗುಹೆ ಟೋರಿಗಳ ಗುಹೆ ಎಂದು ಹೆಸರಾಗಿದೆ. ಬ್ರಿಸ್ಟಲ್ ವಾಣಿಜ್ಯ ಕೇಂದ್ರ. ಗಡಿಯಾರಗಳ ತಯಾರಿಕೆಗೆ ಪ್ರಸಿದ್ಧ. ಇಲ್ಲಿ ಅಮೆರಿಕ ಗಡಿಯಾರಗಳ ವಸ್ತು ಸಂಗ್ರಹಾಲಯವಿದೆ.

	ಬ್ರಿಸ್ಟಲ್ 3 : ಅಮೆರಿಕ ಸಂಯುಕ್ತ ಸಂಸ್ಥಾನದ ಪೆನ್ಸಿಲ್‍ವೇನಿಯ ಪ್ರಾಂತ್ಯದ ಒಂದು ಕೈಗಾರಿಕಾ ನಗರ. ಬಕ್ಸ್ ಕೌಂಟಿಗೆ ಸೇರಿದೆ. ನಗರ ಡೆಲವೇರ್ ನದಿಯ ಪಶ್ಚಿಮ ದಂಡೆಯ ಮೇಲೆ ಫಿಲಿಡೆಲ್ಫಿಯದ ಈಶಾನ್ಯದಲ್ಲಿ ಸುಮಾರು 37ಕಿಮೀ ದೂರದಲ್ಲಿದೆ.

	ಈ ವಸಾಹತು 1697ರಲ್ಲಿ ಪ್ರಾರಂಭವಾಗಿ ನ್ಯೂಜೆರ್ಸಿಯ ಬರ್ಲಿಂಗ್‍ಟನ್ನಿಗೆ ಜಲಮಾರ್ಗ ಸಂಪರ್ಕ ಬೆಳೆದ ಮೇಲೆ ಹೆಚ್ಚು ಅಭಿವೃದ್ಧಿಗೊಂಡಿತು. ಮುಂದೆ ಫಿಲಿಡೆಲ್ಫಿಯಾದಿಂದ ಮೊರಸ್‍ವಿಲೆಗೆ ಹೋಗುವ ಹೆದ್ದಾರಿ ರಚನೆಯಿಂದ ಈ ನಗರ ಮತ್ತಷ್ಟು ಬೆಳೆಯಿತು. ಜನಸಂಖ್ಯೆ 12,085 (1970).

	ಬ್ರಿಸ್ಟಲಿನಲ್ಲಿರುವ ಭೂಜಲ ಚಿಲುಮೆಗಳು ಫಿಲಿಡೆಲ್ಫಿಯನ್ನರಿಗೆ ಹೆಚ್ಚು ಪ್ರಿಯ. ಹಿಂದೆ ಅಮೆರಿಕದ ಕ್ರಾಂತಿಕಾರಿ ಸೈನ್ಯ 1776 ಡಿಸೆಂಬರಿನಲ್ಲಿ ಇಲ್ಲಿ ಬೀಡುಬಿಟ್ಟಿತ್ತು. ಡೆಲವೇರ್ ಕಾಲುವೆ ನಿರ್ಮಾಣ (1832) ಮತ್ತು ಪೆನ್ಸಿಲ್‍ವೇನೀಯ ರೈಲು ರಸ್ತೆ ನಿರ್ಮಾಣ (1834) ಈ ನಗರದ ಅಭಿವೃದ್ಧಿಗೆ ಸಹಕಾರಿಯಾದುವು. ಗಿರಣಿಗಳ ಸ್ಥಾಪನೆ. ಲೋಹಸಾಮಗ್ರಿಗಳ, ರಾಸಾಯನಿಕ ವಸ್ತುಗಳ, ಕಾಗದ ಮತ್ತು ರಗ್ಗುಗಳ ತಯಾರಿಕೆ ಮತ್ತು ಉತ್ಪಾದನೆ ಪ್ರಾರಂಭಿಸಿ 1870ರಿಂದೀಚೆಗೆ ಪ್ರಮುಖ ಕೈಗಾರಿಕಾ ನಗರವಾಗಿ ಬೆಳೆಯಿತು. ಇಲ್ಲಿನ ಫಾಲ್ಸಿಂಗ್‍ಟನ್ ಕಟ್ಟಡ ವಸಾಹತು ಕಾಲದ ಸ್ಮಾರಕವಾಗಿದೆ.

	ಬ್ರಿಸ್ಟಲ್ 4 : ಅಮೆರಿಕ ಸಂಯುಕ್ತ ಸಂಸ್ಥಾನದ ರೊಡೀ ಐಲೆಂಡ್ ಪ್ರಾಂತ್ಯದ ಒಂದು ಕೌಂಟಿ ಮತ್ತು ಕೌಂಟಿಯ ಮುಖ್ಯ ನಗರ ಹಾಗೂ ಬಂದರು. ಪ್ರಾವಿಡೆನ್ಸ್‍ಗೆ ಆಗ್ನೇಯದಲ್ಲಿ ಸುಮಾರು 21ಕಿಮೀ ದೂರದಲ್ಲಿದೆ. ಜನಸಂಖ್ಯೆ 17860 (1970).

	ಈ ನಗರ 1681ರಲ್ಲಿ ಪ್ಲೈಮೌತ್ ಕಾಲೊನಿಯೊಡನೆ ಸೇರ್ಪಡೆಯಾಯಿತು. 1692ರಲ್ಲಿ ಮೆಸಾಚುಸೆಟ್ಸ್‍ಗೆ ಸೇರಿಸಿದ್ದು ಮತ್ತೆ 1746ರಲ್ಲಿ ರೊಡೀ ಐಲೆಂಡ್ ಪ್ರಾಂತ್ಯಕ್ಕೆ ಸೇರಿಸಲಾಯಿತು. ಅಮೆರಿಕನ್ ಕ್ರಾಂತಿಯ ಸಮಯದಲ್ಲಿ 1775 ಅಕ್ಟೋಬರ್ 7ರಂದು ಮತ್ತು 1778 ಮೇ 25ರಂದು ಬ್ರಿಟಿಷ್ ಆಕ್ರಮಣಕ್ಕೆ ಒಳಗಾಗಿ ಈ ನಗರ ಭಾಗಶಃ ನಾಶವಾಯಿತು. 18ನೆಯ ಶತಮಾನದ ವಸಾಹತು ಕಾಲದಲ್ಲಿ ಇಲ್ಲಿಯ ರಮ್ ಉತ್ಪಾದನೆಗೆ ಮತ್ತು ಗುಲಾಮರ ವ್ಯಾಪಾರಕ್ಕೆ ಹೆಸರಾಗಿದ್ದ ಬ್ರಿಸ್ಟಲ್ ಈಗ ಪ್ರವಾಸಿ ಕೇಂದ್ರವಾಗಿದೆ. ಇಲ್ಲಿ ಕ್ರೀಡಾನೌಕೆಗಳು ಹಾಗೂ ವಿಹಾರ ದೋಣಿಗಳನ್ನು ತಯಾರಿಸುತ್ತಾರೆ. ಕೈಗಾರಿಕಾ ಕೇಂದ್ರವಾಗಿ ಅಲ್ಯೂಮಿನಿಯಮ್, ವಿದ್ಯುತ್ ಹಾಗೂ ವಿವಿಧ ಯಂತ್ರೋಪಕರಣಗಳು, ಪ್ಲಾಸ್ಟಿಕ್ ಸರಕುಗಳು, ಗಿರಣಿ ವಸ್ತುಗಳು ಮತ್ತು ರಬ್ಬರ್ ಸಾಮಾನುಗಳನ್ನು ಉತ್ಪಾದಿಸಲಾಗುತ್ತಿದೆ. ಬ್ರಿಸ್ಟಲ್ ವಿದ್ಯಾಕೇಂದ್ರ. ರೋಜರ್ ವಿಲಿಯಮ್ಸ್ ಕಾಲೇಜು ಇದೆ. ವಸಾಹತು ಕಾಲದ ಸ್ಮಾರಕಗಳಾಗಿ ಇಲ್ಲಿ ಕೆಲವು ಕಟ್ಟಡಗಳಿವೆ. ಅವುಗಳಲ್ಲಿ ಬಾಸ್‍ವರ್ತ್‍ನ ಮನೆ ಬ್ರಿಸ್ಟಲ್ ನಗರದಲ್ಲಿ ಅತ್ಯಂತ ಹಳೆ ಮನೆ (1680). ಕೋಟೆ, ಗೌವರ್ನರ್ ಬ್ರಾಡ್‍ಫೋರ್ಡ್‍ನ ವಸತಿಗೃಹ. ಅಮೆರಿಕನ್ ಇಂಡಿಯನ್ ಮತ್ತು ಎಸ್ಕಿಮೋ ಜನರ ಚಿತ್ರ ಕಲೆಗಳಿರುವ ಒಂದು ವಸ್ತು ಸಂಗ್ರಹಾಲಯ ಇಲ್ಲಿವೆ.

	ಬ್ರಿಸ್ಟಲ್ 5 : ಅಮೆರಿಕ ಸಂಯುಕ್ತ ಸಂಸ್ಥಾನದ ವರ್ಜಿನೀಯ ಮತ್ತು ಟೆನಸೀ ರಾಜ್ಯಗಳ ಎಲ್ಲೆಕಟ್ಟಿನ ನಡುವೆ ಇರುವ ಒಂದು ನಗರ. ಸಾಂಸ್ಕøತಿಕವಾಗಿ ಮತ್ತು ಆರ್ಥಿಕವಾಗಿ ಒಂದೇ ಆಗಿದ್ದರೂ ರಾಜಕೀಯವಾಗಿ ವರ್ಜೀನೀಯ ಮತ್ತು ಟೆನಸೀ ರಾಜ್ಯಗಳ ಆಡಳಿತಕ್ಕೆ ಸೇರಿದ ಎರಡು ನಗರ ಪ್ರದೇಶವನ್ನು ಒಳಗೊಂಡಿದೆ. ಜನಸಂಖ್ಯೆ ಬ್ರಿಸ್ಟಲ್ (ಟೆನಸೀ) 22,064 (1970). ಬ್ರಿಸ್ಟಲ್ (ವರ್ಜೀನೀಯ) 14,857 (1970). ಒಂದು ಶತಮಾನಕ್ಕೂ ಹೆಚ್ಚು ಕಾಲ ನಡೆದ ಎರಡುರಾಜ್ಯಗಳ ಗಡಿವಿವಾದವನ್ನು 1903ರಲ್ಲಿ ಬಗೆಹರಿಸಲಾಯಿತು. ಬ್ರಿಸ್ಟಲ್ ಕೈಗಾರಿಕಾನಗರ. ವಿವಿಧ ಲೋಹಗಳ ಗಣಿಗಾರಿಕೆ, ಮರಸಾಗಣೆ. ಹಡಗು ನಿರ್ಮಾಣ ಇವುಗಳ ಜೊತೆಗೆ ರೇಯಾನ್, ಕಾಗದ, ಚರ್ಮ ಮತ್ತು ಮರದ ಸಾಮಾನುಗಳ ತಯಾರಿಕೆಯುಂಟು. ಇಲ್ಲಿ ಕಿಂಗ್ ಕಾಲೇಜ್ (1867) ಮತ್ತು ಇತರ ಶಾಲಾ ಕಾಲೇಜುಗಳಿವೆ.

	ಇವಲ್ಲದೆ ಫ್ಲಾರಿಡ ರಾಜ್ಯದ ಲಿಬರ್ಟಿ ಕೌಂಟಿಯಲ್ಲೂ, ನ್ಯೂಹ್ಯಾಂಪ್‍ಷೈರಿನ ಗ್ರಾಫ್ಟನ್ ಕೌಂಟಿಯಲ್ಲೂ ಮತ್ತು ವೆರ್‍ಮೌಂಟ್‍ನ ಅಡಿಸನ್ ಕೌಂಟಿಯಲ್ಲೂ ಇದೇ ಹೆಸರಿನ ನಗರಗಳಿವೆ.

	ಬ್ರಿಸ್ಟಲ್ ಹೆಸರಿನ ನಗರಗಳಲ್ಲದೆ ಒಂದು ಕೊಲ್ಲಿ ಹಾಗೂ ಒಂದು ಕಡಲು ಕಾಲುವೆಯುಂಟು. ಕೊಲ್ಲಿ ಅಲಾಸ್ಯದ ನೈರುತ್ಯದಲ್ಲಿರುವ ಬೇರಿಂಗ್ ಸಮುದ್ರದ ಸುಮಾರು 300 ಕಿಮೀ ಭೂ ಚಾಚು. ಸುಮಾರು 435 ಕಿಮೀ ಅಗಲವಾಗಿದೆ. ನದಿಗಳ ಬಾಯಿಗಳಿಂದ ಕೂಡಿದ ಈ ಕೊಲ್ಲಿ ಹೆಚ್ಚು ಆಳವಾಗಿಲ್ಲ. ನೌಕಾಯಾನಕ್ಕೆ ಅನುಕೂಲವಾಗದಿದ್ದರೂ ಸಣ್ಣ ಮೀನುಗಾರಿಕೆಗೆ ಅನುಕೂಲವಾಗಿದೆ.

	ಬ್ರಿಸ್ಟಲ್ ಕಡಲು ಕಾಲುವೆ : ಗ್ರೇಟ್ ಬ್ರಿಟನ್ನಿನ ಪಶ್ಚಿಮದಲ್ಲಿರುವ ಅಟ್ಲಾಂಟಿಕ್ ಸಾಗರದ ಒಂದು ಕಿರುಗಾಲುವೆ, ಕಾಲುವೆಯ ಉತ್ತರ ತೀರ ಸೌತ್‍ವೇಲ್ಸಿನ ಕಲ್ಲಿದ್ದಲು ಗಣಿ ಪ್ರದೇಶವಾಗಿದ್ದು ಕೈಗಾರಿಕೆಗಳ ಕೇಂದ್ರವಾಗಿದೆ. ದಕ್ಷಿಣತೀರ ವ್ಯವಸಾಯ ಪ್ರಧಾನವಾಗಿದೆ. ಕಾಲುವೆಯ ಪೂರ್ವ ತುದಿಯಲ್ಲಿ ಸವೆರನ್ ನದಿ ಅಳಿವೆಯ ಬಾಯಿಯಿದೆ. (ಕಾಲುವೆ ನೌಕಾಯಾನಕ್ಕೆ ಅನುಕೂಲವಾಗಿದೆ.) ಈ ಕಾಲುವೆಯ ಮಧ್ಯದಲ್ಲಿ ಡಿವಾನ್‍ಷೈರ್‍ನ ವಾಯುವ್ಯತೀರಕ್ಕೆ ಸುಮಾರು 20ಕಿಮೀ ದೂರದಲ್ಲಿ ಲಂಡೀ ದ್ವೀಪವಿದೆ.
(ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ